Sunday, 5 January 2014

ನಗಲಾರದ ನಗು!

(ಗಮನಿಸಿ : ಇಲ್ಲಿ ಉಲ್ಲೇಖಿಸಿರುವ ಪಾತ್ರಗಳು, ಕತೆಯಲ್ಲಿನ ಸನ್ನಿವೇಶಗಳು ಕೇವಲ ಕಾಲ್ಪನಿಕ.  ಇಲ್ಲಿ ಬರೆದ ವಿಷಯವು ಯಾವುದೇ ವ್ಯಕ್ತಿಗೆ ಅಥವಾ ಘಟನೆಗೆ ಹೋಲಿಕೆಯಾದಲ್ಲಿ ಅದು ಕೇವಲ ಕಾಕತಾಳಿಯ !) 

ಎರಡು ವರ್ಷದ ಹಿಂದೆ, ನನಗೆ ಪರಿಚಯದವರಾದ ಹಿರಿಯ ದಂಪತಿಯರು ತಮ್ಮ ಐವತ್ತನೆಯ ವಿವಾಹ ವಾರ್ಷಿಕೋತ್ಸವಕ್ಕೆ ಆಹ್ವಾನಿಸಿದರು. ಒಲ್ಲೆ ಒಲ್ಲೆ ಎಂದು ಹೇಳುತ್ತಲೇ ಆ ವಿವಾಹ ವಾರ್ಶೋಕೋತ್ಸವದ  ಕಾರ್ಯಕ್ರಮಕ್ಕೆ ಹೋದೆ. ಒಳ್ಳೆ 5 ಸ್ಟಾರ್ ಕಲ್ಯಾಣ ಮಂಟಪದಲ್ಲಿ ಈ ಕಾರ್ಯವನ್ನು ಆಯೋಜಿಸಲಾಗಿತ್ತು. ಅತ್ಯಂತ ಅಚ್ಚುಕಟ್ಟಾಗಿ, ಸಾಲಾಗಿ ಜೋಡಿಸಿದ್ದ ನವಿರಾದ ಕುಶನ್ ಚೇರ್ಗಳು!  ಅದರ ಕಾಲುಗಳು ಕಾಣದಹಾಗೆ ಶುಭ್ರ ಬಿಳಿಯ ಬಟ್ಟೆಯನ್ನು ಕುಶಲಾತ್ಮಕವಾಗಿ ಜೋಡಿಸಲಾಗಿತ್ತು. ಖಾಲಿಯಾಗಿದ್ದ ಚೇರೊಂದರಲ್ಲಿ ಕುಳಿತೆ.   ಎಲ್ಲೆಲ್ಲೂ ಘಮ್ಮನೆಯ ಪರಿಮಳ, ACಯ ತಿಳಿ ತಂಪು. ಕುಳಿತ ತತ್ಕ್ಷಣ, ತಂಪು ಪಾನಿಯದ ಒಂದು ಪ್ಲ್ಯಾಸ್ಟಿಕ್ ಲೋಟವೊಂದು ನನ್ನ ಕೈ ಸೇರಿತು. ಅಲ್ಲಿ ನೆರೆದಿದ್ದವರೆಲ್ಲಾ ಅಪರಿಚಿತರೇ. ಕುಳಿತು ಏನು ಮಾಡಬೇಕೆಂದು ತೋಚದೆ, ನಿಧಾನವಾಗಿ ಆ ತಂಪು ಪಾನಿಯವನ್ನು ಹೀರುತ್ತಾ, ಅಲ್ಲಿ ಇಲ್ಲಿ ಕತ್ತಲುಗಾಡಿಸುತ್ತಾ ಅಲ್ಲಲ್ಲೇ ನಡೆಯುತ್ತಿದ್ದ ಆಗುಹೋಗುಗಳನ್ನು ಗಮನಿಸತೊಡಗಿದೆ.

"ವಧು-ವರ" ರಿಗಾಗಿ ಅಲಂಕೃತಗೊಂಡ ವೇದಿಕೆಯ ಮೇಲೆ, ಸಿಂಹಾಸನದ ಮಾದರಿಯ ಆ  ದ್ವಿ-ಚೇರ್ ಗಳು ಇನ್ನೂ ಖಾಲಿಯಾಗಿಯೇ ಇದ್ದವು. "ವಧು-ವರ"ರಿಬ್ಬರು ಆಸೀನರಾಗಲು ಇನ್ನೂ ಮುಹೂರ್ತ ಕೂಡಿಬಂದಿರಲಿಲ್ಲ. ಅಲ್ಲಿಯೇ ಯಾವುದೋ ಚಟುವಟಿಕೆಯಲ್ಲಿ ಮಗ್ನರಾಗಿದ್ದ ಯುವ ಗುಂಪೊಂದು Western Classical ಸಂಗೀತದ ಒಂದು C D ಯನ್ನು ಜೋಡಿಸುವುದರಲ್ಲಿದ್ದರು. ಮತ್ತೊಂದು ಕಡೆ, 'ವಧು-ವರ'ರು ನಡೆದು ಬರುವ ಹಾದಿಯಲ್ಲಿ ಕೆಂಪು ಕಾರ್ಪೆಟ್ಟನ್ನು ಹಾಸಿ ಅದರ ಮೇಲೆ ಗುಲಾಬಿ ದಳಗಳನ್ನೆಲ್ಲಾ ಚೆಲ್ಲಾಡಿ ಅಲಂಕೃತಗೊಳಿಸುತ್ತಿದ್ದರು. 'ವಧು-ವರ' ರು, ಆ ಕೆಂಪು ಕಾರ್ಪೆಟ್ಟಿನ ಮೇಲೆ ನಡೆದುಕೊಂಡು ಬರುವಾಗ, ನಾವುಗಳೆಲ್ಲ ಅವರಮೇಲೆ ಪುಷ್ಪ ವೃಷ್ಟಿಯನ್ನು ಮಾಡಲೆಂದು, ಎಲ್ಲರ ಕೈಯ್ಯಲ್ಲೂ ಯಥೇಚ್ಚವಾಗಿ ಗುಲಾಬಿದಳಗಳನ್ನು ಕೊಡಲಾಯಿತು.

ಸರಿ, ಆ ಸುಮುಹೂರ್ತವು ಬಂದೇ ಬಿಟ್ಟಿತು. ನನಗದೇಕೋ "ಶುಭಮಂಗಳಾ  ಸುಮೊಹೂರ್ತವೇ" ಈ ಹಾಡಲ್ಲಿ, ತಮ್ಮ ಮದುವೆಗೆಂದು ಚಿತ್ರದಲ್ಲಿನ ನಾಯಕ ನಾಯಿಕಿಯು ಕುದುರೆಯ ರಥದಲ್ಲಿ ಕುಳಿತು ಬರುವ ದೃಶ್ಯ ನೆನಪಾಯಿತು. ಆದರೆ ಇಲ್ಲಿ ಹಾಗೇನು ನಡೆಯಲಿಲ್ಲ. ಬದಲಿಗೆ, ಅವರಿಬ್ಬರ ಆಗಮನದಲ್ಲಿ ಭಿನ್ನವಾದ ಸ್ವಾರಸ್ಯವಿತ್ತು. ಈ ವಿವಾಹ ವಾರ್ಶಿಕೋತ್ಸವವನ್ನು ಇಷ್ಟೆಲ್ಲಾ ದುಬಾರಿಯಾಗಿ ಆಯೋಜಿಸಲಾಗಿದ್ದ ಕಾರಣ, ಆ ದಂಪತಿಗಳಿಬ್ಬರೂ ಸಹ ಅ ಮಟ್ಟದ ವೈಭವದಲ್ಲೇ ತಯಾರಾಗಿ ಬರುವರೆಂದು ಎಣಿಸಿದ್ದೆ. ಆಶರ್ಯವೆಂದರೆ, ಅವರಿಬ್ಬರೂ ಸಹ ನನ್ನ ಊಹೆಗೆ ವಿರುದ್ಧವಾದ ರೀತಿಯಲ್ಲಿ ಸರಳವಾಗಿಯೇ ತಯಾರಾಗಿದ್ದರು!

ಅವರಿಬ್ಬರು ಒಳಗೆ ಪ್ರವೇಶಿಸುತ್ತಿದಂತೆ, ನಾವೆಲ್ಲರೂ ಎದ್ದು ಕುತೂಹಲದಿಂದ, ಉತ್ಸಾಹದಿಂದ ಇಣುಕಿ ಇಣುಕಿ ನೋಡ ತೊಡಗಿದೆವು. ತತ್ಕ್ಷಣ  ಆ western classical ಮಾದರಿಯ ಹಿನ್ನಲೆ ಸಂಗೀತವು  ಕೇಳಿಬಂತು. ಅದನ್ನು ಕೇಳಿ, ನನಗೆ ಮಿಲಿಟರಿಯ ಮಾದರಿಯಲ್ಲಿ ಸೆಟೆದು ನಿಂತು ಬಿರುಸಾಗಿ ಒಂದು ಸಲ್ಯೂಟ್ ಹೊಡೆಯುವ ಪ್ರಚೋದನೆಯಾಯಿತು! ಏಕೆಂದರೆ, ನನ್ನ ಕಿವಿಗೆ ಆ ಸಂಗೀತವು ಹೆಚ್ಚು ಕಡಿಮೆ ಯಾವುದೋ ಯುರೋಪಿಯನ್ ದೇಶದ ರಾಷ್ಟ್ರ ಗೀತೆಯಂತಿತ್ತು! ನನಗೆ ಅರ್ಥವಾಗಿದ್ದೇನೆಂದರೆ , ದಂಪತಿಯರಿಬ್ಬರು ನಿಧಾನವಾದ ನಡಿಗೆಗೂ('Walking down the aisle') ಮತ್ತು ಆ ಹಿನ್ನಲೆಯ ಸಂಗೀತಕ್ಕೂ ತಾಳೆಯಾಗಬೇಕೆಂದು ಮಾಡಿದ್ದ ಪ್ಲ್ಯಾನ್ ಅದು. ಅದೇ, ನಮ್ಮ ಹಾಲಿವುಡ್ ಸಿನೆಮಾಗಳಲ್ಲಿ ವಧುವನ್ನು ಮದುವೆಯ altarಗೆ  ಕರೆದು ಕೊಂಡು ಬರುವಾಗ ಮೊಳಗುವ ಹಿನ್ನಲೆಯ orchestration ತರಹ ! ಆದರೆ, ಈ ಹಿನ್ನಲೆಯ ಸಂಗೀತದ ವಿಷಯವು ದಂಪತಿಗಳಿಗೆ ಗೊತ್ತಿತ್ತೋ ಇಲ್ಲವೋ, ಅವರಂತೂ ಮುಲಾಜಿಲ್ಲದೆ ಅವರದೇ ಸಹಜವಾದ ರೀತಿಯಲ್ಲಿ ದಾಪುಗಾಲು  ಹಾಕಿಯೇ ಒಳಗೆ ಪ್ರವೇಶ ಮಾಡಿದರು. ಯಾರೋ ಅವರ ಕಿವಿಯಲ್ಲಿ ಪಿಸುಗುಟ್ಟಿದರೋ ಎನೋ, ತತ್ಕ್ಷಣ ತಮ್ಮ ನಡಿಗೆಯ ವೇಗವನ್ನು ನಿಧಾನಿಸಿದರು. ಮತ್ತೇನೋ ಪಿಸುಗುಟ್ಟಲಾಯಿತು. ಇವರೇನು ಹೇಳಿದರೋ, ಪಾಪ 'ವಧು'ವಿಗೇನು ಕೇಳಿಸಿತೋ ಏನೋ, ಆ ಹಿರಿಯ ಮುತ್ತೈದೆಯು, ಆ ಹಿನ್ನಲೆಯ ಸಂಗೀತಕ್ಕೆ ಚಪ್ಪಾಳೆ ತಾಳವನ್ನುಹಾಕುತ್ತ ಹೆಜ್ಜೆ ಹಾಕತೊಡಗಿದರು. ಅವರ ತಾಳವೂ ಆ  ಹಿನ್ನಲೆ ಸಂಗೀತಕ್ಕೆ ತಾಳೆಯಾಗಲೇ ಇಲ್ಲ!

ವರ್ಷಕ್ಕೆ ನಾಲ್ಕೈದು ಬಾರಿಯಾದರೂ ತಿರುಪತಿಯ ದರ್ಶನವನ್ನು ಮಾಡಿ ಬರುವ ಈ ದಂಪತಿಗಳಿಗೆ, ವೆಂಕಟೇಶನ ದರ್ಶನಕ್ಕೆಂದು ಮೈಲಿ ಉದ್ದದ ಭಕ್ತರ ಸಾಲು "ಗೋವಿಂದ ! ಗೋವಿಂದ!" ಎಂದು ಭಕ್ತಿಯಿಂದ ಉದ್ಗರಿಸುತ್ತ, ಚಪ್ಪಾಳೆ ಹಾಕುತ್ತ ಮುನ್ನುಗ್ಗುವ ದೃಶ್ಯವನ್ನು ನೋಡಿ ಮತ್ತು ಅದಕ್ಕೆ ಒಗ್ಗಿ ಹೋಗಿರುವ ಕಾರಣದಿಂದಾಗಿಯೋ ಎನೋ, ಪಾಪ ಆ ಹಿರಿಯ 'ವಧು'ವು ಅದೇ ಶೈಲಿಯಲ್ಲಿ ನಡೆಯುತ್ತ, ಭಕ್ತಿಯಿಂದ ಚಪ್ಪಾಳೆಯ ತಾಳವನ್ನು ಹಾಕುತ್ತ ಮುನ್ನಡೆದು ಬಂದಂತಿತ್ತು! ದಂಪತಿಯರ ಬಂಧು ಬಳಗದವರು, ಅವರನ್ನು ಮೆಲ್ಲಗೆ ಮೆಟ್ಟಿಲನ್ನು ಹತ್ತಿಸಿ ವೇದಿಕೆಯ ಮೇಲೆ ಕರೆದೊಯ್ದರು.

ಇನ್ನು ದೀಪವನ್ನುಬೆಳಗುವ ಸಮಾರಂಭ ! ರಾಯರಿಗಂತೂ, ಒಳಗೆ ಪ್ರವೇಶ ಮಾಡಿದಾಗಿನಿಂದ ಒಂದೇ ಸಮನೆ ಫೋನ್ ಕರೆಗಳು. ಅವರ ಖಾಸಗಿ ಬಿಸಿನೆಸ್ ಗೆ  ಸಂಬಂಧ ಪಟ್ಟ ಯಾವುದೋ ಕಿರಿ ಕಿರಿಯ ವಿಷಯವನ್ನು ಚರ್ಚೆ ಮಾಡುತ್ತಲೇ ಬಂದರು. ದೀಪದ ಕಂಭವನ್ನು ಎಷ್ಟು ಚೆನ್ನಾಗಿ ಅಲಂಕರಿಸಿ, ಸಜ್ಜು ಗೊಳಿಸಿದ ಅವರ ಮಕ್ಕಳು, ತಮ್ಮ ತಂದೆಯನ್ನು ಅವರ ಫೋನ್ ಚರ್ಚೆಯಿಂದ ಬೇರ್ಪಡಿಸಿ, ಅವರ ಹಸ್ತದಿಂದ ದೀಪವನ್ನು ಬೆಳಗಿಸುವ ಹೊತ್ತಿಗೆ ಸಾಕು ಸಾಕಾಗಿತ್ತೋ ಎನೋ. ಪಾಪ ಅವರ ಹೆಂಡತಿಯಂತೂ ಒಂದೇ ಸಮನೆ ತೆಲುಗಿನಲ್ಲಿ "ಯೆವಂಡಿ ... ಯೆವಂಡಿ" ಅಂತ ಕರೆದಿದ್ದೇ ಕರೆದಿದ್ದು!

ಸರಿ, ಅಲ್ಲೇ ಹತ್ತಿರದಲ್ಲಿದ್ದ ಸಿಂಹಾಸನದ ದ್ವಿ-ಚೇರ್ ಗಳತ್ತ ಕರೆದು ಕೊಂಡು ಹೋಗಲು ಅಷ್ಟೇನೂ ಕಷ್ಟವಾಗಲಿಲ್ಲ. ಇನ್ನು ಪರಸ್ಪರ ಹಾರಗಳನ್ನು ಹಾಕುವ ಸಮಾರಂಭ. ಮತ್ತದಕ್ಕೆಂಥದ್ದೋ ಹಿನ್ನಲೆ ಸಂಗೀತವಂತೆ! ಆ ಸಂಗೀತವು ರೆಡಿಯಾಗುವವರೆಗೂ, 'ವಧು-ವರ'ರು ಒಬ್ಬರಿಗೊಬ್ಬರು ಎದುರಾಗಿ ನಿಂತು, ಹಾರವನ್ನು ಕೈಯಲ್ಲಿ ಹಿಡಿದು ಸಜ್ಜಾಗಿದ್ದರು. ಅವರ ಹಿಂದೆ, ಅವರ moral supporters ಸಾಲಾಗಿ ಒಬ್ಬರ ಬೆನ್ನ ಹಿಂದೆ ಮತ್ತೊಬ್ಬರು ನಿಂತಿದ್ದರು. ವಧುವಿನ ಹಿಂದೆಯೇ ನಿಂತಿದ್ದಿ ಒಬ್ಬಾಕೆಯು, ಯಾವುದೋ ಕೆಲಸವನ್ನು ನೆನಪಿಸಿಕೊಂಡು ಅಲ್ಲಿಯೇ ಪಕ್ಕದಲ್ಲಿದ್ದ ಕೋಣೆಯತ್ತ ಹೋಗುವ ಭರದಲ್ಲಿದ್ದಳು. ಆದರೆ ತತ್ಕ್ಷಣ 'ವಧು'ವು ಆಕೆಯನ್ನು ತಡೆದು ನಿಲ್ಲಿಸಿ "ನಿಂಚ್ಕೊವೇ ..ಇಪ್ಪುಡು ಎಕಡ್ಕೆ ಪೋತಾವು? ಆ ಅಬ್ಬಾಯಿ ಫೋಟೋ ಲೇಸ್ತಾರು ಇಪ್ಡು ... ಊರ್ಕಿ ನಿಂಚ್ಕೊ ಇಕಡ್ಕೆ!" ಎಂದು ಒಂದು ಅವಾಜ್ ಹಾಕಿದ್ದರಿಂದ ಆ ಅಮ್ಮಾಯಿ ಅಲ್ಲಿಯೇ ನಿಲ್ಲ ಬೇಕಾಯಿತು! ಅಂತೂ ಇಂತೂ ಹಾರ ಹಾಕುವ ಸಮಾರಂಭವೂ ಮುಗಿಯಿತು, ಆದರೆ ರಾಯರ ಕಿರಿ ಕಿರಿಯ ಫೋನ್ ಕರೆಗಳು ಮಾತ್ರ ಅದರ ಪಾಡಿಗೆ ಅದು ಮುಂದುವರೆಯುತ್ತಿತ್ತು.

ಇದಾದ ನಂತರ ಕೇಕ್-ಕಟ್ಟಿಂಗ್ ಸಮಾರಂಭ ! ಅದಕ್ಕೊಂದಷ್ಟು ಗದ್ದಲ, ಜನ ಸಂದಣಿ ! ಅವರ ಮಧ್ಯೆ ವಧುವಿನ ನೆಚ್ಚಿನ ಫೋಟೋಗ್ರ್ಯಾಫರ್ ಆ ಗದ್ದಲಲ್ಲೇ ಕೊಸರಾಡುತ್ತಾ ಫೋಟೋಗಳನ್ನು ಸೆರೆಹಿಡಿಯುತ್ತಿದ್ದನು. ಸರಿ, ದೊಡ್ಡ ಗಾತ್ರದ ಆನಿವರ್ಸರಿ ಕೇಕನ್ನು ದಂಪತಿಯ ಮುಂದೆ ತಂದು ಇಡಲಾಯಿತು. ಯಾರೋ ರಾಯರ ಕೈಯಿಂದ ಅವರ ಫೋನನ್ನು ಕಸಿದುಕೊಂಡು ಕೇಕ್ ಕಟ್ ಮಾಡುವ ಸಲುವಾಗಿ ಒಂದು ಚೂರಿಯನ್ನು ಅವರ ಹಸ್ತದಲ್ಲಿ ಇರಿಸಿದರು. ಇನ್ನೇನು ರಾಯರು ಕೇಕ್ ಕಟ್ ಮಾಡ್ಬೇಕು, ಆಗ ಯಾರೋ ಒಬ್ಬರು ಕೇಕ್ ಮುಂದೆ ನಿಂತಿರುವ ದಂಪತಿಯರ ಫೋಟೋವೊಂದನ್ನುತೆಗೆದು, ನಂತರ ಕೇಕ್ ಕಟ್ ಮಾಡಲು ಆಜ್ಞಾಪಿಸಿದರು. ಅವರು ಕೇಕ್ ಕಟ್ ಮಾಡುವಾಗಲೇ ಫೋಟೋ ತೆಗೆದರಾಯಿತು ಎಂದು ಮತ್ತಾರೋ ಗೋಗರೆದರು. ಆ ಗೊಂದಲದಲ್ಲಿ ರಾಯರಿಗೆ ಏನು ಮಾಡಬೇಕೆಂದು ತೋಚದೆ ತಮ್ಮ ಐವತ್ತು ವರ್ಷಗಳ ವೈಫನ್ನು ತಮ್ಮ ಪಕ್ಕದಲ್ಲಿ ನಿಲ್ಲಿಸಿಕೊಂಡು ಕೈಯಲ್ಲಿದ್ದ ನೈಫನ್ನು, ಶಿವಾಜಿ ಮಹಾರಾಜರು ಹೇಗೆ ಕ್ಷತ್ರಿಯ ವರ್ಚಸ್ಸಿಗೆ  ತಕ್ಕಹಾಗೆ ಕತ್ತಿಯನ್ನು ಹಿಡಿಯುವ  ಶೈಲಿಯಲ್ಲಿ, ರಾಯರು ಸಹ ಆ ಕೇಕ್ ಕಟ್ ಮಾಡುವ ನೈಫನ್ನುಹಿಡಿದುಕೊಂಡು ಒಂದು ಪೋಜ್ ಕೊಟ್ಟೇಬಿಟ್ಟರು! ಆ ಫೋಟೊಗ್ರ್ಯಾಫರ್
ಸಹ ಅವರ ಪೋಜನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದೇ ಬಿಟ್ಟ ! ನಂತರ ಆಲೋಚನೆ ಮಾಡಿದೆ, ಆ ಫೋಟೋವನ್ನು ನೋಡುವಾಗ ಆ ದಂಪತಿಗಳಿಗೆ ಹೇಗಾಗಿರ ಬೇಡ!   

ಇವೆಲ್ಲವೂ ನನ್ನೊಬಳ ಗಮನಕ್ಕೆ ಮಾತ್ರ ಬರುತ್ತಿದೆಯೇ ಅಥವಾ ಬೇರೆಯವರು ಸಹ ಇದನ್ನು ಗಮನಿಸಿ ನನ್ನ ಹಾಗೆ ಏನು ಗೊತ್ತಿಲ್ಲದವರ ಹಾಗೆ ಸುಮ್ಮನಿರುವರೇ ? ಒಳಗೊಳಗೆ ಅದೆಷ್ಟು ಕೆಟ್ಟ ದಟ್ಟ ನಗುವಿನ ಅಲೆಯು ಏಳುತ್ತಿತ್ತು, ಆದರೆ ಎದುರಿಗೆ ಹಲ್ಲು ಕಚ್ಚಿಕೊಂಡು ಗಂಭೀರ ವದನೆಯಾಗಿ ಸಂಯಮ ತಂದುಕೊಳ್ಳಬೇಕಾಯಿತು! ಇದನ್ನು ನೆನೆದು ಬಹಳ ಸಂಕಟವೂ ಆಯಿತು !  ವಿನೋದದ ನಗೆಯ ಬುಗ್ಗೆಯನ್ನು ಮನಸಾರೆ ನಕ್ಕು ಬಿಡುವ ಬದಲು ಅದನ್ನು ದಮಿಸಿ ತಡೆಯಬೇಕಾಯಿತಲ್ಲ, ಎಂದು ! ಕನಿಷ್ಠ ನನ್ನ ಜೊತೆಗೆ, ಗುರುತಿನವರು ಯಾರಾದರು ಇದ್ದಿದ್ದರೆ ಖಂಡಿತ ಅವರ ಸಾಥಿಯನ್ನು ಪಡೆದು ಸಮಾಧಾನವಾಗುವಷ್ಟು ನಕ್ಕುಬಿಡುತ್ತಿದ್ದೆ !

ಕೊನೆಗೂ ಊಟದ ಸಮಯವೂ ಬಂದೆ ಬಿಟ್ಟಿತು. ಊಟದ ಎಲೆಗಳನ್ನು ಹಾಕಿ ತಯಾರಾಗಿಸುವ ತನಕ, ದಂಪತಿಯರ ಸಂಬಂಧಿಕರಾದ ಒಬ್ಬಾಕೆಯು ಅವರ ಮೇಲೆ ಒಂದು ಕವನವನ್ನು ಬರೆದು, ರಾಗ ಸಂಯೋಜನೆಯನ್ನೂ ಮಾಡಿ ತನ್ನ ಸಹ ಗಾಯಕಿಯರ ಸಮೂಹದೊಂದಿಗೆ ಹಾಡಲು ಶುರುಮಾಡಿದರು. ಅವರು ಹಾಡಲು ಶುರು ಮಾಡಿದ್ದೇ ತಡ ನನ್ನ ಎದೆಯು ಧಸಕ್ ಎಂದಿತು ! ಓ ದೇವರೇ ! ಇದೂ ಸಾಧ್ಯವೇ? ಜಗತ್ತಿನಲ್ಲಿ ನಮ್ಮ ಹಾಗೆ ಕಾಣುವ ಕನಿಷ್ಠ ಏಳು ಮಂದಿಯಾದರೂ ಇರುತ್ತಾರೆಂಬ ಪ್ರತೀತಿಯಿದೆ. ಆದರೆ ಧ್ವನಿಗಳ ಹೋಲಿಕೆ ಇಷ್ಟು ಅಪ್ಪಟವಾಗಿರುವುದು ಇದೇ ಮೊದಲೆನೆಯ ಅನುಭವ ! ನನ್ನ ಕಿವಿಯನ್ನು ನಂಬಲಾರದೆ ಹೋದೆ !  ಆಕೆಯ ಧ್ವನಿಯು ಮತ್ತು ಆಕೆಯ ಗಾಯನದ ಶೈಲಿಯು ಥೇಟ್ ನುಸ್ರತ್ ಫತೇಹ್ ಅಲಿ ಖಾನರ ಹಾಗೆಯೇ ಇತ್ತು ! ಸಾಕ್ಷಾತ್ ಖಾನರ ಆತ್ಮವೇ ಆಕೆಯ ಧ್ವನಿಯಲ್ಲಿ ಅವಿರ್ಭವಿಸಿ ಹಾಡಿದಂತಿತ್ತು!

ನನ್ನೊಳಗೆಯೇ ನಗುವನ್ನು ಹಿಡಿದಿಟ್ಟುಕೊಂಡ ಕಾರಣದಿಂದಾಗಿಯೋ ಎನೋ ಹೊಟ್ಟೆಯು ಸಿಕ್ಕಾಪಟ್ಟೆ ಚುರುಗುಟ್ಟುತ್ತಿತ್ತು. ಅವರು ಹೇಳಿದ್ದೇ ತಡ, ಮೊದಲ ಪಂಕ್ತಿಯ ಸೀಟು ಕೈ ತಪ್ಪಿ ಹೋಗುವ ಮುನ್ನವೇ ಒಂದು ಖಾಲಿ ಜಾಗವನ್ನು ಹಿಡಿದು ಊಟಕ್ಕೆ ಕುಳಿತು ಬಿಟ್ಟೆ. ಹಬ್ಬದೂಟದ ಸ್ವಾದ ಹೇಳಬೇಕೇ ? ಆಹಾ ! ಆಕಡೆಯಿಂದ ಭಟ್ಟರು ಮುಷ್ಠಿ ಮುಷ್ಠಿ ಆಲೂಗಡ್ಡೆಯ ಚಿಪ್ಸನ್ನು ಬಡಿಸಿಕೊಂಡು ಬರುತ್ತಿದ್ದರು. ಅವರು ಬಡಿಸುವ ಗಾತ್ರವನ್ನು ನೋಡಿ ಹೆದರಿದೆ. ನನ್ನ ಎಲೆಗೆ ಬಡಿಸುವ ಮುನ್ನವೇ ನಾನು "ದಯವಿಟ್ಟು ಸ್ವಲ್ಪ ಹಾಕಿ, ಅಷ್ಟೊಂದು ಬೇಡಾ" ಎಂದು ಕೇಳಿ ಕೊಂಡೆ. ಬಿಸಿಬೇಳೆಯ ಭಾತಿಗೆ ಆಲೂಗಡ್ಡೆಯ ಚಿಪ್ಸ್ ಇರಲೇ ಬೇಕಲ್ಲವೇ? ಆದರೆ ಭಟ್ಟರು ನನ್ನ  ಕೋರಿಕೆಯನ್ನು ತೀರಾ ಗಂಭೀರವಾಗಿ ಪರಿಗಣಿಸಿದರೋ ಅಥವಾ ಬೇಕೆಂದೇ ಹಾಗೆ ಮಾಡಿದರೋ ಏನೋ,
ಸ್ವಲ್ಪ ದೊಡ್ಡದಾದ ಒಂದೇ ಒಂದು  ಚಿಪ್ಸ್ ಅನ್ನು ಬುಟ್ಟಿಯಿಂದ ಆಯ್ದು, ತಮ್ಮ ಮುಷ್ಟಿಯಲ್ಲಿ ಪುಡಿ ಪುಡಿ ಮಾಡಿ, ಅಷ್ಟನ್ನು ಮಾತ್ರ ಬಡಿಸಿ ಮುಂದಿನ ಎಲೆಗೆ ಬಡಿಸಲು ಹೋಗೇ ಬಿಟ್ಟರು ! 

ನನ್ನ ಪಕ್ಕದಲ್ಲಿ ಕುಳಿತ ಒಬ್ಬ ಯುವತಿಯು ಅವಳ ಪಕ್ಕದಲ್ಲಿ ಕುಳಿತ ಅವಳ ತಂದೆಗೆ, ಆ ಭಟ್ಟರ ಕಡೆಗೆ ಕೈ ತೋರಿಸುತ್ತ "ಅಪ್ಪ ಅವರ ಶರ್ಟ್ ನೋಡು ಎಷ್ಟು ತಮಾಷೆಯಾಗಿದೆ" ಎಂದು ಹೇಳಿದಳು. ನಾನೂ ನನ್ನ ದೃಷ್ಟಿಯನ್ನುಶರ್ಟಿನ ಕಡಗೆ ಹರಿಸಿದೆ. ನನಗಂತೂ ಯಾವುದೇ ತಮಾಷೆಯ ವಿಷಯವು ಕಾಣಿಸಲಿಲ್ಲ. ಭಟ್ಟರು ಧರಿಸಿದ್ದ ಶರ್ಟ್ ಅಪ್ಪಟ ಬಿಳಿಯದಾಗಿತ್ತು. ತೋಳಿನ ಅಂಚು ಮತ್ತು ಬಟನ್ ಹಾಕುವ ಅಂಚಿಗೆ ಮಾತ್ರ ಹಸಿರು ಬಣ್ಣದ ಪಟ್ಟಿ ಎದ್ದು ಕಾಣುತ್ತಿತ್ತು.  ಕೂಡಲೇ ಆ ಯುವತಿಯ ತಂದೆಯು "ಹೂಂ ಹೌದು ...ಪಾಪ ಅವರ ಪಂಚೆಯಲ್ಲೇ ಶರ್ಟನ್ನು ಹೊಲಿಸಿಕೊಂಡಿದ್ದಾರೆ ಅಂತ ಕಾಣತ್ತೆ" ಎಂದರು. ಆಗಷ್ಟೇ ಖಾರದ ಚಿಪ್ಸಿನ  ತುಂಡೊಂದನ್ನು ಬಾಯಿಗೆ ಹಾಕೊಂಡ ನನಗೆ, ಅವರ ಹಾಸ್ಯ ಚಟಾಕಿಯಿಂದಾಗಿ, ಚಿಪ್ಸಿನ ಖಾರವು ನೆತ್ತಿಗೇರಿ ಬಿಡ್ತು ! ಆಗಲೂ ಸಹ ಮನಸಾರೆ ನಗಲಾಗಲಿಲ್ಲ ! ಕೈ ತೊಳೆದು, ತಾಂಬೂಲವನ್ನು ಸ್ವೀಕರಿಸಿ, ಸಿಹಿ ಸಿಹಿಯಾದ ಬೀಡಾ ಒಂದನ್ನು ಜಿಗಿಯುತ್ತ, ಕಲ್ಯಾಣ ಮಂಟಪದಿಂದ ಹೊರಬಿದ್ದ ನನಗೆ ಎನೋ ಒಂದು ಬಗೆಯ ವಿನೋದವಾದ ತೃಪ್ತಿ, ಹಾಸ್ಯವಾಯು ತಗುಲಿದ ಅನುಭವ! 

ಆಟೋ ಒಂದರಲ್ಲಿ ಕುಳಿತು ಬರುವಾಗ, ನಡೆದ ಘಟನಾವಳಿಯನ್ನು ಮೆಲುಕು ಹಾಕುತ್ತ ನನ್ನಷ್ಟಕೆ ನಾನೇ ನಗಾಡುತ್ತಿದ್ದೆ. ನಾ ನಗುವುದನ್ನು ಆಟೋ ಡ್ರೈವರ್, ಕನ್ನಡಿಯಲ್ಲಿ ಗಮನಿಸುತ್ತಿರುವದನ್ನು ಗಮನಿಸಿ ಪುನಃ ಮುಖದ ಮೇಲೆ ಗಾಂಭೀರ್ಯ ತಂದುಕೊಂಡೆ. ಈಗಲೂ ನನ್ನೊಳಗಿನ ಅವ್ಯಕ್ತ ಹಾಸ್ಯವನ್ನು ಮನಸಾರೆ ನಕ್ಕು ವ್ಯಕ್ತ ಪಡಿಸಲಾಗುತ್ತಿಲ್ಲವಲ್ಲ ಎಂದು ನೆನೆದು ಒಳ ಒಳಗೇ ಮತ್ತಷ್ಟು ನಗು ಉಕ್ಕಿಬಂತು !  

No comments:

Post a Comment