ಹರಿದು ಹೋಗಿದ್ದು ರುಪಾಯಿ ನೋಟುಗಳೋ ? ಸಮಯವೋ ?
ದಿನ ನಿತ್ಯದ ಬಸ್ಸು
ಪ್ರಯಾಣದಲ್ಲಿ ಆಗುವ ಘಟನೆಗಳು, ಅದರ ಆಗುಹೋಗುಗಳ ಅನುಭವಗಳು ನಮ್ಮನ್ನು
ಸ್ವಲ್ಪ ಮಟ್ಟಿಗೆ ಸೂಕ್ಷ್ಮಗ್ರಾಹಿಯಾಗಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಜೊತೆಗೆ ಇಂತಹ ಘಟನೆಗಳು ಲಘು ಮನರಂಜನೆಯೂ ಕೊಡುತ್ತದೆ ಅಂತ ಬೇರೆ ಹೇಳ ಬೇಕಾಗಿಲ್ಲ.
ಮೊನ್ನೆ ದಿನ ಅನುಭವಕ್ಕೆ ಬಂದ ಒಂದು ಘಟನೆಯನ್ನು ಇಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ.
ಬಸ್ ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ಚಿಲ್ಲರೆ ಪಡೆಯುವ-ಕೊಡುವ ವಿಷಯದಲ್ಲಿ ಆಗುವ 'ಚಿಲ್ಲರೆ' ಜಗಳಕ್ಕೇನು
ಕಡಿಮೆಯಿಲ್ಲ. ಇದು ದಿನನಿತ್ಯದ ಕತೆ. ಆದರೆ ಈ ಬಾರಿ ಕಂಡ 'ಚಿಲ್ಲರೆ' ಜಗಳಕ್ಕೆ ವಿಚಿತ್ರವಾದ ಹೊಸ ತಿರುವೊಂದು ಮೂಡಿ ಬಂತು.
ಹೀಗೊಂದು ಚಿಲ್ಲರೆ ಜಗಳವು ಬಗೆ ಹರೆಯುವ ವರೆಗೂ ಬಸ್ ಡ್ರೈವರ್ ಬಸ್ಸನ್ನು ನಿಂತ ಜಾಗದಿಂದ ಕದಲಿಸದೇ ಹಾಗೆಯೇ ನಿಲ್ಲಿಸಿದ್ದ. ಇಲ್ಲಿ, ಜಗಳವು ಬಗೆ ಹರಿಯದೆ, ವಾಗ್ವಾದ ಮುಂದುವರಿಯುತ್ತಿತ್ತು. ಹಿಂದಿನ ಸೀಟಿನಲ್ಲಿ ಕುಳಿತ ಹಿರಿಯರೊಬ್ಬರಿಗೆ ಸಿಟ್ಟು ನೆತ್ತಿಗೇರಿಬಿಡ್ತು. ಆದರೆ ಅವರ ಪ್ರತಿಕ್ರಿಯೆ ಬಹಳ ಸೋಜಿಗವಾಗಿತ್ತು. ಅವರು ಕಂಡಕ್ಟರ್ನ್ನು ಬಯ್ದದ್ದಲ್ಲದೆ, ತಮ್ಮ ಜೇಬಿನಿಂದ ಹತ್ತು ರುಪಾಯಿಗಳ ನೋಟುಗಳನ್ನು ತೆಗೆದು, "ಅದ್ಯಾಕೆ ಚಿಲ್ಲರೆ ಕೊಡಕ್ಕೆ ಅಷ್ಟೊಂದು ಜಗಳ ಆಡ್ತಿ ...ತೊಗೋ ಇದನ್ನ ಕೊಟ್ಟು ಮುಗಿಸು ... ಬಸ್ಸನ್ನು ಹೊರಡಿಸು ...ಲೇಟ್ ಆಗ್ತಿದೆ ಇಲ್ಲಿ ಎಲ್ರಿಗೂ " ಅಂತ ಹೇಳುತ್ತಾ ಅವನತ್ತ ನೋಟುಗಳನ್ನು ಅಸಹನೆಯಿಂದ ಬಿಸಾಡಿದರು!
ಅಲ್ಲೇ ನಿಂತ ಹೆಂಗಸೊಬ್ಬರ ಬಳಿ ತೇಲಿ ಬಂದು ಬಿದ್ದವು, ಆ ನೋಟುಗಳು. ಪಾಪ, ಆವಕ್ಕಾದ ಆ ಹೆಂಗಸು, ಬಿದ್ದ ನೋಟುಗಳನ್ನು ಪುನಃ ಆ ಹಿರಿಯ ಮಹಾಶಯರಿಗೆ ಹಿಂದಿರುಗಿಸಿದಾಗ, ಆಕೆಯನ್ನೂ ಬಿಡಲಿಲ್ಲ ಅವರು. 'ಒಮ್ಮೆ ಬಿಸಾಡಿದ ಮೇಲೆ, ಅವನ್ನು ಮುಟ್ಟ ಬಾರದು. ನೀನು ಯಾಕೆ ವಾಪಸ್ಸು ತಂದು ಕೊಟ್ಟೆ ..?" ಅಂತ ಗುಡುಗುತ್ತಾ, ವಾಪಸ್ಸು ತಮ್ಮ ಕೈ ಸೇರಿದ ಆ ನೋಟುಗಳನ್ನು ಪರ ಪರನೆ ಹರಿದು ಕಿಟಕಿಯಾಚೆ ಎಸದೇ ಬಿಟ್ಟರು !!
ರುಪಾಯೀ ನೋಟುಗಳನ್ನು ಹರಿದು ಹಾಕಿದ ಬಗೆಯನ್ನು ಕಂಡು ದಿಗ್ಭ್ರಮೆಗೊಂಡ ಕಂಡಕ್ಟರ್, ಆ ಹಿರಿಯ ವ್ಯಕ್ತಿಗೆ ಟಿಕೆಟ್ ಕೊಡಲು ಕೂಡಲೇ ಮುಂದಾದ. ಆದರೆ ಅವರ ಬೈಗುಳ ಮುಂದುವರಿಯುತ್ತಿದ್ದ ಕಾರಣ, ಮೊದಲೇ ತಲೆ ಕೆಡಿಸಿ ಕೊಂಡಿದ್ದ ಅವನು, ಅವರೊಡನೆ ವಾಗ್ವಾದಕ್ಕಿಳಿದ. "ಚಿಲ್ಲರೆ ಕೊಡೋದು ನನ್ನ ಜವಾಬ್ದಾರಿ ..ನಾನೇನು ನಿಮ್ಮ ಹತ್ರ ಚಿಲ್ರೆ ಕೇಳಿದೆನೇ? ....ನೀವ್ಯಾಕೆ ನಿಮ್ಮ ದುಡ್ಡು ಹರಿದುಹಾಕಿ ಬಿಸಾಕಿದ್ರಿ ?" ಅಂದ. ಅಂತು ಆ ಹಿರಿಯರ ಈ ವಿಚಿತ್ರ ವರ್ತನೆಯು, ಜಗಳದಲ್ಲಿ ಮುಳುಗಿ ಹೋಗಿದ್ದ ಕಂಡಕ್ಟರ್ ನ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು!
ನಂತರ ನಾನು ಇದನ್ನು ಬರೆಯುವಾಗ ಅನಿಸಿದ್ದು ಏನೆಂದರೆ "ಚಿಲ್ಲರೆ ಕೊಡಲಾಗದಿದ್ದರು ಪರವಾಗಿಲ್ಲ, ನೋಟು ಹರಿದು ಬಿಸಾಡುವ ಕ್ರಿಯೆ, ಲೊಬೊ ಲೊಬೊ ಅಂತ ಬಾಯಿ ಬಡಿದು ಕೊಳ್ಳುವಷ್ಟು ಸಂಕಟ ಆಗೋದು ಯಾರಿಗಾದರು ಆಗಲಿ, ಅದು ಸಹಜವೇ ... ಅದು ಯಾರದೇ ರುಪಾಯಿ ನೋಟುಗಳು ಆಗಿರಲಿ !! ಹ ಹ ಹ !!
ಅದಕ್ಕವರ ಕೋಪ
ಮತ್ತಷ್ಟು ಉದ್ರೇಕಗೊಂಡು "ನೀನು ಸರ್ಕಾರಿ ನೌಕರ ...ನಮ್ಮಿಂದ ನೀನು ...ನಿನ್ನಿಂದ
ನಾನಲ್ಲ ... ಆಗ್ಲಿಂದ ನೋಡ್ತಾಯಿದೀನಿ, ಎಷ್ಟು ಹೊತ್ತು ಕಾಯ್ಸೋದು ನಮ್ಮನ್ನ ? ಹೌದು ...ಹರಿದು ಹಾಕ್ತೀನಿ ...
ಅದರಲ್ಲೇನು..?" ಅಂತ ಧ್ವನಿಯೇರಿಸುತ್ತ, ಮತ್ತೊಂದು ಇಪ್ಪತ್ತು ರುಪಾಯಿ ನೋಟನ್ನು
ತಮ್ಮ ಜೇಬಿನಿಂದ ತೆಗೆದು, ಹರಿದು, ಅದೇ ಕಿಟಕಿಯಾಚೆ ಬಿಸಾಡಿದರು!
ಆದರೆ ಕಂಡಕ್ಟರ್ ಬಳಿ ಟಿಕೆಟ್ ಪಡೆಯುವಾಗ ತಾವು ತಲುಪ ಬೇಕಾದ ಸ್ಥಳದ ಹೆಸರನ್ನು ಅತ್ಯಂತ
ಪ್ರಶಾಂತವಾಗಿ ಹೇಳಿ, ಟಿಕೆಟ್ ಪಡೆದ ನಂತರ ಪುನಃ ಕಂಡಕ್ಟರ್ ಗೆ ಛೀಮಾರಿ
ಹಾಕಲಾರಂಭಿಸಿದರು
"ನಾನು ಮನಸ್ಸು ಮಾಡಿದರೆ ನಿನಗೆ ಮೆಮೋ ಕೊಡಿಸಬಲ್ಲೆ ...ನನಗೆ ಹೆಚ್ಚೆಂದರೆ ಅರೆಸ್ಟ್
ವಾರಂಟ್ ಬರ ಬಹುದು ಅಷ್ಟೇ!" (ನೋಟು ಹರಿದು ಹಾಕಿದ್ದಕ್ಕೆ ಅರೆಸ್ಟ್ ವಾರಂಟ್ ಅಂತ
ಹೇಳಿರಬಹುದೇ ..???!!) ಎನ್ನುತ್ತಾ ಇನ್ನೂ ಏನೇನೋ ಬೆದರಿಸುತ್ತಿದ್ದರು. ಇವರು ಬಹುಷಃ
ವೃತ್ತಿಯಲ್ಲಿ ವಕೀಲರಿರಬಹುದೆಂದು ಊಹಿಸಿದೆ.
ಆದರೂ, ಇಷ್ಟೊಂದು ರೋಚಕವಾದ ಘಟನೆ ಯಾವುದೋ ಟಿವಿ ಚ್ಯಾನೆಲ್ಲಿನ ಪೂರ್ವಯೋಜಿತವಾದ ರಿಯಾಲಿಟಿ ಷೋ ಇರಬಹುದೇ ಎಂಬ ಶಂಕೆ ನನಗಾಯಿತು. ಕಣ್ಣಗಲಿಸಿ, ಸುತ್ತಲೂ ಒಂದು ಬಾರಿ ಕಣ್ಣು ಹಾಯಿಸಿದೆ, ಎಲ್ಲಾದರೂ, ಯಾರಾದರೂ ಗುಪ್ತ ವಿಡಿಯೋ ಕ್ಯಾಮೆರಾವನ್ನು ಹಿಡಿದು ಶೂಟ್ ಮಾಡುತ್ತಿರುವರೇ ಎಂದು. ಅಂತಹದ್ದು ಏನು ಕಾಣಲಿಲ್ಲ ನನಗೆ.
ಇವರ ನಡವಳಿಕೆಯಿಂದ ಅಕ್ಕ ಪಕ್ಕದಲ್ಲಿದ್ದವರಿಗೆ ವಿಚಿತ್ರವೆನಿಸಿ ಸ್ವಲ್ಪ ಹೆದರಿಕೆಯೂ ಆಗಿತ್ತು. ಆಗದೇ ಏನು ? ನಮಗೆ ಯಾರಾದರೂ ಪಿಸ್ದು, ಹರಿದು ಹೋಗಿರುವ ಹಳೆಯ ನೋಟನ್ನು ನೀಡಿದರೆ, ಎಂಥಾ ಬೇಜಾರಾಗತ್ತೆ. ಅಂತದ್ದರಲ್ಲಿ, ಇವರು ಮತ್ತಷ್ಟು ಕೆರಳಿದರೆ, ಇನ್ನೆಷ್ಟು ನೋಟುಗಳು ಚಿಂದಿಯಾಗಿ ಮಣ್ಣು ಪಾಲಾಗುತ್ತದೋ ಅಂತ ಹೆದರಿರಬೇಕು, ಅದು ಪರರ ನೋಟೇ ಆಗಿರಲಿ ! ಹ ಹ ಹ ! ಹಾಗಾಗಿ ಕಂಡಕ್ಟರ್ ಗೆ ಸನ್ನೆಯಿಂದಲೇ ಸುಮ್ಮನಾಗಿಸಿದರು. ಮತ್ತೆ ! ಯಾರಾದರೂ ಹಾಗೆ ಮುಲಾಜಿಲ್ಲದೆ ತಮ್ಮ ಜೇಬಿಂದ, ತಮ್ಮದೇ ಆದ ರುಪಾಯಿ ನೋಟುಗಳನ್ನು ಅಷ್ಟು ನಿರ್ದಾಕ್ಷಿಣ್ಯವಾಗಿ ಹರಿದು ಹಾಕಿ ಕಿಟಕಿಯಿಂದ ಬಿಸಾಡಿದ್ದು ಯಾವುದಾದರು ಚಲನ ಚಿತ್ರದಲ್ಲಿ ಕಂಡಿದ್ದರೂ ತಮ್ಮ ನಿಜ ಜೀವನದಲ್ಲಿ ಕಣ್ಣಾರೆ ಕಂಡಿರಲಾರದ್ದನ್ನು, ಇಂದು ಕಂಡರು !

ಹೀಗೆ ..ಹೇಗೋ ಪರಿಸ್ಥಿತಿ
ಹತೋಟಿಗೆ ಬಂತು.
ಮೊದಲಿಗೆ ಈ ಘಟನೆ, ಕೊಂಚ ಕಿರಿಕಿರಿ, ಕೊಂಚ ವಿನೋದ ಅನಿಸಿದರೂ, ನಂತರ ಯೋಚಿಸಿದಾಗ, ಆ ಹಿರಿಯರಿಗೆ ಬಂದ ಅಸಹನೀಯವಾದ ಕೋಪ-ಹತಾಶೆ ವಿಪರೀತಕ್ಕೆ ಹೋಗಿದ್ದೂ ಆಶ್ಚರ್ಯವೇನಿಲ್ಲ, ಅದೂ ಅವರ ವಯಸ್ಸಿಗೆ ! ಪಾಪ ಪ್ರಾಯಶಃ ಅವರು ತಮ್ಮ ಜೀವನದಲ್ಲಿ ಸಮಯಕ್ಕೆ ಹೆಚ್ಚು ಒತ್ತುಕೊಟ್ಟ ಜೀವಿಯಾಗಿದ್ದ ಕಾರಣದಿಂದಾಗಿಯೋ ಏನೋ, ಅಥವಾ ಅವರ ಜೀವನದಲ್ಲಿ ಯಥೇಚ್ಚವಾಗಿ ಎಲ್ಲೆಲ್ಲೂ ಕಾಣಬಹುದಾದ ಸಮಯ- ನಷ್ಟದ ಕಹಿ ಅನುಭವಗಳನ್ನು ಸತತವಾಗಿ ಕಂಡು, ರೋಸಿಹೋಗಿ, ಈಗಲೂ ಚಿಲ್ಲರೆ-ಕಾಸಿನ ಕಾರಣದಿಂದಾಗಿ ತಮ್ಮ ಮತ್ತು ಬಹು ಜನರಿಗಾಗಾಗುತ್ತಿದ್ದ ಸಮಯ ನಷ್ಟದ ವೆಚ್ಚ, ರುಪಾಯಿ ನೋಟುಗಳ ನಷ್ಟಕ್ಕಿಂತ ಹೆಚ್ಚು ಹಾನಿಕರವೆಂದನಿಸಿತೋ ಏನೋ, ಆ ಹಿರಿ-ಜೀವಿಯ ಅಸಹಾಯಕತೆ, ಸಂಕಟವು ಹೀಗೆ ವ್ಯಕ್ತವಾಯಿತೇನೋ!
ಅಲ್ಲವೇ ಮತ್ತೆ? ರುಪಾಯಿ ನೋಟುಗಳು ಹರಿದು ಹೋಗೋದು ಕಣ್ಣಿಗೆ ಸಾಕ್ಷಾತ್ ಕಾಣಿಸುತ್ತದೆ ಆದರೆ ಸಮಯ ಹರಿದು ಹೋಗಿ ನಷ್ಟವಾಗಿದ್ದು ಕಣ್ಣಿಗೆ ಸಾಕ್ಷಾತ್ ಕಾಣಿಸೋಲ್ಲ. ಅದು ಅವರವರ ವಯ್ಯಕ್ತಿಕ ಮಟ್ಟದ ಮೌಲ್ಯಮಾಪನಕ್ಕೆ, ಸೂಕ್ಷ್ಮತೆಗೆ ಮತ್ತು ಗ್ರಹಿಕೆಗೆ, ಗೋಚರವಾಗುವಂತದ್ದು ಅನ್ಸತ್ತೆ ...