Thursday 14 June 2012

ತುಂಬಿದ ಕೊಡ.

ಹೊತ್ತಿಗೆ ಸರಿಯಾಗಿ ಬಸ್ ಸ್ಟಾಪ್ ತಲುಪುವ ಆತುರದಲ್ಲಿ ಬಿರುಸಾಗಿ ನಡೆದು ಹೋಗುವ ನನ್ನನ್ನು ತಡೆದು ನಿಲ್ಲಿಸಿದಳೊಬ್ಬ ಹತ್ತೋ ಅಥವ ಹನ್ನೊಂದು ವರುಷದ ಬಾಲಕಿ.

ಆಂಜನೇಯನ ಗುಡಿಯೆದುರಿಗಿರುವ ಬೋರ್ ವೆಲ್ ನೀರನ್ನು ದೊಡ್ಡ ಪ್ಲಾಸ್ಟಿಕ್ ಬಿಂದಿಗೆಯಲ್ಲಿ ತುಂಬಿರಿಸಿ, ದಾರಿಯಲ್ಲಿ ನಡೆದು ಹೋಗುವ ಯಾರಾದರೊಬ್ಬರು ನೀರು ತುಂಬಿರಿಸಿದ ಆ ಬಿಂದಿಗೆಯನ್ನು ಎತ್ತಿ ತನ್ನ ತಲೆಯ ಮೇಲಿರಿಸುವ ಸಹಾಯದ ನಿರೀಕ್ಷೆಯಲ್ಲಿದ್ದಳು. ನಾ ಹತ್ತಿರ ನಡೆದು ಬರುತ್ತಿದ್ದಂತೆಯೇ ಅವಳು,

"ಅಂಟಿ, ಒಸಿ ಈ ಬಿಂದ್ಗೇನ್ ನನ್ ತಲೆಮ್ಯಾಕ್ ಇರ್ಸು" ಅಂದಳು.

ಇಲ್ಲೊಂದು ಸಣ್ಣ ಸಹಾಯ ಮಾಡುವ ಅವಕಾಶಕ್ಕೆ ನಾನು ಮುಂದಾಗುವ ಮುನ್ನವೇ, ಯಾವುದೋ ಸಮ್ಮೋಹಿನಿಗೊಳಗಾದವಳಂತೆ ಯಾಂತ್ರಿಕವಾಗಿ ಅವಳಿಗೆ ಸಹಾಯ ಮಾಡಲು ಮುಂದಾದೆ. ಅನಾಯಾಸವಾಗಿ ಸಹಾಯ ಪಡೆವ ಗತ್ತು ಅವಳ ಧ್ವನಿಯಲ್ಲಿತ್ತು !

 
ಹ್ಯಾಂಡ್ ಬ್ಯಾಗನ್ನು ಬದಿಗಿಟ್ಟು, ತುಂಬಿದ ಬಿಂದಿಗೆಯನ್ನೆತ್ತಲು ಅದರ ಕುತ್ತಿಗೆಗೆ ಕೈ ಹಾಕಿದೆ. ನೀರು ತುಂಬಿದ ಆ ದೊಡ್ಡ ಬಿಂದಿಗೆಯನ್ನು ನಾನೊಬ್ಬಳೇ ಎತ್ತಲಾಗದೆಂದು ಗೊತ್ತಿದ್ದೂ, ಪ್ರಯತ್ನ ಪಡುವ ನನ್ನ ಕೃತ್ಯವು ನಾಟಕೀಯವೆನಿಸಿತು.  ನನಗಿಂತ  ಸಾಕಷ್ಟು ಕಿರಿಯಳಾದ ಆ ಬಾಲಕಿಯ ಎದುರು, ಕೊಡವೆತ್ತುವ ಕಾರ್ಯವನ್ನು ಪ್ರಯತ್ನಿಸಿದ ನಂತರ ಎತ್ತಲಾಗದೆ  ಸೋಲನ್ನೊಪ್ಪಿಕೊಳ್ಳುಲು ನನ್ನ ಮನಸ್ಸಿಗೆ  ಅಭ್ಯಂತರವಿರಲಿಲ್ಲವೇನೋ ...

ನಾ ಅಂದುಕೊಂಡ ಹಾಗೆ  ಆ ಕೊಡವೋ, ಇಟ್ಟ ಜಾಗದಿಂದ ಜಪ್ಪಯ್ಯ ಅಂದರೂ ಕದಲಲಿಲ್ಲ. 

ಆ ಹುಡುಗಿಯ ಮುಖದಲ್ಲಿ, ವಯಸ್ಸಿಗೆ ಸಹಜವಾದ ಮುಗ್ಧತೆ ಯಥೇಚ್ಚವಾಗಿ ಕಾಣುತ್ತಿದ್ದರೂ, ಅವಳ ತೀಕ್ಷ್ಣ ಕಣ್ಣುಗಳು ನಾನು ಮರೆಮಾಚುತ್ತಿದ್ದ ನನ್ನ ಅಸಹಾಯಕ ಸ್ಥಿತಿಯನ್ನು ಕಂಡು ಕೊಂಡವು. ಬಡಕಲಾಗಿ ಕಾಣುತ್ತಿದ್ದ ಪುಟ್ಟ ಕೈಗಳೆರಡು ನನ್ನ ಸಹಾಯಕ್ಕೆ ಬಂದವು.
ಈ ಬಾರಿ ಆ ಭಾರವಾದ ಕೊಡ ತಾನಾಗಿಯೇ ಎದ್ದು ಸಲೀಸಾಗಿ ಅವಳ ಶಿರವೇರಿದಂತಿತ್ತು!
 

ಸತ್ಯನಾರಾಯಣ ಪೂಜೆಯ ವೇಳೆಯಲ್ಲಿ, ದಂಪತಿಗಳಿಬ್ಬರು ಜೊತೆಯಾಗಿ ಆರತಿ ಮಾಡುವಾಗ, ಆರತಿಯ ತಟ್ಟೆ ಹಿಡಿದ ಪತಿಯ ಕೈಯನ್ನು ಪತ್ನಿಯಾದವಳು ಸುಮ್ಮನೆ ಸ್ಪರ್ಶಿಸಿಯೇ ಆರತಿ ಮಾಡುವ ಕಾರ್ಯಕ್ಕೆ ಸಹಭಾಗಿಯಾದಂತೆ, ನನ್ನ ಕೈಗಳೂ ಸಹ ಆ ಕೊಡವನ್ನೆತ್ತುವ ಕಾರ್ಯದಲ್ಲಿ ನೆಪ ಮಾತ್ರಕ್ಕೆ ಸ್ಪರ್ಶ ಮಾಡಿದಂತಿತ್ತು. ನನ್ನ ಕೈಗಳಿಗಾದ ಅವಮಾನವನ್ನು ನನ್ನೊಳಗೇ ಅನುಭವಿಸಿ, ಆದರೇ ಹೊರಗೆ ಮಾತ್ರ ಕಿಂಚಿತ್ ತೋರಿಸಿಕೊಳ್ಳದೆ, ಅವಳ ತಲೆಯ ಮೇಲೆ ಕೊಡವನ್ನು 'ಇಟ್ಟು', "ಜೋಪಾನ" ಅಂತ ಬೇರೆ ದೊಡ್ದಸ್ತಿಕೆತನದ ಕಾಳಜಿಯನ್ನು ತೋರುತ್ತ ಮನಸ್ಸಿಗೆ ಕೊಂಚ ಸಮಾಧಾನ ತಂದು ಕೊಂಡೆ.

ಒದ್ದೆಯಾದ ಕೈಗಳನ್ನು, ದುಪ್ಪಟ್ಟದ ತುದಿಗೆ ಒರೆಸಿಕೊಂಡು, ಬದಿಗಿಟ್ಟಿದ್ದ ಹ್ಯಾಂಡ್ ಬ್ಯಾಗನ್ನು ಹೆಗಲಿಗೆ ತೂಗು ಹಾಕಿಕೊಂಡು ಪುನಃ  ಬಸ್ ಸ್ಟಾಪಿನತ್ತ ಹೆಜ್ಜೆಹಾಕಿದೆ.
 

ಮಣಭಾರದ ಕೊಡವನ್ನು ತಲೆಯ ಮೇಲೆ ಜೋಡಿಸಿಕೊಳ್ಳುತ್ತಲೇ ನನ್ನ ಹಿಂದೆ ಹಿಂಬಾಲಿಸಿ ಬಂದವಳು...
 

"ಎಲ್ ವೋಯ್ತಿದ್ಯಾ ಅಂಟಿ?" ಅಂತ ಕೇಳಿದಳು.

ಹತ್ತೇರಿ ! ಮತ್ತದೇ ಗತ್ತು !!

ಮೊದಲೇ ಪೆಚ್ಚೆನಿಸಿದ್ದ ನನಗೆ, ಅವಳ ಪ್ರಶ್ನೆಯಿಂದ ಮತ್ತಷ್ಟು ಇರುಸು ಮುರುಸಾದೆ. ಕೊಡವನ್ನು ತಲೆಯ ಮೇಲೆ ಇಟ್ಟಾಯಿತಲ್ಲ ! ಇನ್ನೆಂತ ಮಾತು ! ಮನಸಿನಲ್ಲೇ ಗೊಣಗಾಯಿಸಿದೆ.


ಆದರೂ, ಆ ದನಿಯಲ್ಲಿನ ಗತ್ತು ಉತ್ತರವ ಗಿಟ್ಟಿಸಿಕೊಂಡ್ತು.


"ಟ್ಯೂಶನ್ ಕ್ಲಾಸಿನ ಮಕ್ಕಳಿಗೆ ಪಾಠ ಕಲಿಸಲು ಹೋಗ್ತಾ ಇದ್ದೇನೆ" ಎಂದು ಹೇಳಲು ನನ್ನ ಮನಸ್ಸು ಹಿಂದೇಟು ಹಾಕಿತು. ನಾ ಕೊಡುವ ಉತ್ತರ ಅವಳಿಗೆ ಅರ್ಥವಾಗುವುದೋ ಇಲ್ಲವೋ ಎಂಬ ಪ್ರಶ್ನೆಗಿಂತ, ತಲೆಯಮೇಲೆ ತನ್ನ ವಯಸ್ಸಿಗೆ ಮೀರಿದ ಭಾರವನ್ನು ಹೊತ್ತಿರುವ ಅರಿವೇ ಇಲ್ಲದೆ, ಇದೂ ಸಹ ತಾನು ಆಡುವ 'ಮನೆಯ ಆಟದ' ಒಂದು ಭಾಗವೆಂಬಂತೆ ಕಂಡ ಅವಳಿಗೆ, ನಾನು ಟ್ಯೂಶನ್ ಕ್ಲಾಸಿಗೆ ಹೋಗುವ ವಿಷಯ ಅವಳ ಪ್ರಶ್ನೆಗೆ ಬಹಳ ಅಸಹಜವಾದ ಉತ್ತರವೆನಿಸಿತು.


"ಸಿಟಿ ಕಡೆಗೆ ಹೋಗ್ತಾಯಿದೀನಿ" ಅಂತಷ್ಟೇ ಹೇಳಿ ಬೇಗನೆ ಮುಂದೆ ನಡೆದು ಹೋದೆ.


ಕೊಂಚ ದೂರ ಹೋಗಿ ಹಿಂದಿರುಗಿ ನೋಡಿದೆ, ಒಂದು ಕೈಯಲ್ಲಿ ತಲೆಯ ಮೇಲಿನ ಕೊಡವನ್ನು ಹಿಡಿದು ಮತ್ತೊಂದು ಕೈ,  ಅಲ್ಲೇ ಮರಳು ರಾಶಿಯ ಮೇಲೆ ಆಡುತ್ತಿದ್ದ ಬಹುಶ ಮೂರು ವರ್ಷದ ಮಗುವಿನ ಕೈಯನ್ನು ಹಿಡಿದು ದರ ದರನೆ ಎಳೆದುಕೊಂಡೊಯ್ಯುತ್ತಿತ್ತು!

ತುಂಬಿದ ಕೊಡ ತುಳುಕಲ್ಲವಂತೆ  ...ನಿಜ, ಇರಬಹುದು! ಆದರೆ ಇಲ್ಲಿ, ಅಲ್ಲಲ್ಲಿ ತುಸು ತುಳುಕುತ್ತಿದ್ದರೂ, ಅದನ್ನು ಹೊತ್ತ ಆ ಪುಟ್ಟ ಒಡತಿಯ ಪುಟ್ಟ ತಲೆಯ ಮೇಲೆ, ಆ ಪುಟ್ಟ  ಕೈಗಳ ಬಿಗಿ ಹಿಡಿತದಲ್ಲಿ ಭದ್ರವಾಗಿ ಕೂತಿತ್ತೂ, ಆ ತುಂಬಿದ  ಕೊಡ !